NLP_Assignment_1 / eesanje /url_46_103_8.txt
CoolCoder44's picture
efe37858b586a9a048bc0ecc57a15bf9f7189f016b8fcfa2006a47467850c382
c188c15 verified
raw
history blame
7.07 kB
ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಸಿಎಂ ವಿವೇಚನೆ ಬಿಟ್ಟಿದ್ದು : ಎಚ್‌.ಕೆ.ಪಾಟೀಲ್‌
ಬೆಂಗಳೂರು,ಜೂ.20-ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನ ನಡೆಸುವ ದಿನಾಂಕ ನಿಗದಿಪಡಿಸುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿವೇಚನೆಗೆ ಬಿಡಲಾಗಿದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆಯಾಗಿದ್ದು, ದಿನಾಂಕವನ್ನು ಮುಖ್ಯಮಂತ್ರಿಗಳೇ ನಿರ್ಧರಿಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜಿಎಫ್‌ ಗಣಿ ಗುತ್ತಿಗೆಗೆ ಸಂಪುಟ ಒಪ್ಪಿಗೆ ನೀಡಿದ್ದು, 1300 ಎಕರೆ ಪ್ರದೇಶದಲ್ಲಿ ಗುತ್ತಿಗೆಗೆ ಅವಕಾಶ ಸಿಗಲಿದೆ. ಕೇಂದ್ರ ಸರ್ಕಾರ ಈ ಸಂಬಂಧ ಸಲ್ಲಿಸಿದ ಪ್ರಸ್ತಾವನೆಗೆ ಸಮತಿ ಸೂಚಿಸಲಾಗಿದೆ. ಮರು ಗುತ್ತಿಗೆಯಿಂದ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ಕೈಗಾರಿಕಾ ವಸಾಹತು ಸ್ಥಾಪನೆಗೂ ಅನುಕೂಲವಾಗಲಿದೆ. ಹೀಗಾಗಿ ಸಂಪುಟ ಸಭೆ ವಿಶೇಷ ಅನುಮತಿಯನ್ನು ನೀಡಿದೆ ಎಂದರು.
ಪ್ರಧಾನಿ ಉಚ್ಚತರ್‌ ಅಭಿಯಾನ ಯೋಜನೆಯಡಿ ರಾಜ್ಯದ 6 ವಿವಿಗಳನ್ನು ಮೇಲ್ದರ್ಜೆಗೇರಿಸಲು 279.77 ಕೋಟಿ ರೂ.ಗಳ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳ ಅನುದಾನದಡಿ ಮೂಲ ಸೌಕರ್ಯ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಯೋಜನೆಯನ್ನು 29.19 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಆಡಳಿತಾತಕ ಅನುಮೋದನೆ ನೀಡಿದೆ.ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಹಾಗೂ ಬಾಕಿ ವಸೂಲಾತಿ ಮಾಡಲು ಸ್ಥಳೀಯ ಮಹಿಳಾ ಸ್ವ ಸಹಾಯ ಗುಂಪುಗಳ ಸೇವೆಯನ್ನು ಪಡೆಯಲು ಒಪ್ಪಿಗೆ ನೀಡಲಾಯಿತು ಎಂದರು.
ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಬರಲಿದೆ. ಶೇ.30 ರಿಂದ 40 ರಷ್ಟು ಬಾಕಿ ವಸೂಲಿಯಾಗಿಲ್ಲ. ಹೀಗಾಗಿ ಸ್ವಸಹಾಯ ಸಂಘಗಳಿಗೆ ವಸೂಲಿ ಮಾಡಲು ಅವಕಾಶ ಕಲ್ಪಿಸಿದ್ದು, ಶೇ.5 ರಷ್ಟು ಪ್ರೋತ್ಸಾಹ ಧನ ಸಂಘಗಳಿಗೆ ಸಿಗಲಿದೆ ಎಂದರು.ಬಾಹ್ಯ ನೆರವಿನೊಂದಿಗೆ ಪ್ರಗತಿ ಪಥ ಯೋಜನೆಯಡಿ 7,110 ಕಿ.ಮೀ.ಗಳ ಗ್ರಾಮೀಣ ರಸ್ತೆಗಳನ್ನು 5,190 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತಕ ಅನುಮೋದನೆ ನೀಡಲಾಗಿದೆ. ವಿಶ್ವಬ್ಯಾಂಕ್‌ನಿಂದ ಸಾಲ ಪಡೆದು 2 ವರ್ಷಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ ಎಂದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿನ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೋಟರಿ ಇಂಟರ್‌ನ್ಯಾಷನಲ್‌ರವರ ಸಹಭಾಗಿತ್ವದೊಂದಿಗೆ 2.37 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತಕ ಅನುಮೋದನೆ ದೊರೆತಿದೆ.
ನ.26 ರ ಸಂವಿಧಾನ ದಿನಾಚರಣೆ ಮತ್ತು ಆ.15 ರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಸರ್ಕಾರದಿಂದ ನಡೆಯುವ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನ ಪಿತಾಮಹ ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಮೈಸೂರಿನ ಕೆ.ಆರ್‌.ಆಸ್ಪತ್ರೆಯ ಆವರಣದಲ್ಲಿ ನೂತನ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಗೆ 75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಆಡಳಿತಾತಕ ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್‌‍ ಠಾಣೆಗಳೆಂದು ಘೋಷಿಸಿ ಈ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳ ಮಂಜೂರಾತಿ ನೀಡಲು ಸಮತಿಸಲಾಗಿದೆ.